ಅಭಿಜಾತ ಸಾಹಿತ್ಯವಾದದ ಯುಗ
	
ಪುರಾತನ ಗ್ರೀಕ್, ರೋಮನ್ ಸಾಹಿತ್ಯಗಳನ್ನು ಹೊಸಹುಟ್ಟಿನ (ರೆನೆಸಾನ್ಸ್) ಕಾಲದ ವಿಮರ್ಶಕರು ಅಭಿಜಾತ ಸಾಹಿತ್ಯ (ಕ್ಲಾಸಿಕ್ಸ್) ವೆಂದು ಕರೆದು, ಅವುಗಳಲ್ಲಿ ರೂಪಿತವಾದ ವಿಶೇಷ ಕಲಾಲಕ್ಷಣಗಳನ್ನು ಮಾದರಿಸೂತ್ರಗಳೆಂದು ಅನುಸರಿಸುವ ಸಂಪ್ರದಾಯವನ್ನು ಸ್ಥಾಪಿಸಿದರಷ್ಟೆ. (ನೋಡಿ- ಅಭಿಜಾತಸಾಹಿತ್ಯಮಾರ್ಗ) ಆದರೆ ಪುರಾತನಸಾಹಿತ್ಯ ಪರಂಪರೆಯ ವಿಚಾರವನ್ನು ಎಲ್ಲರೂ ಎಲ್ಲ ಕಾಲದಲ್ಲೂ ಸುಲಭವಾಗಿ ಅಂಗೀಕರಿಸಲಿಲ್ಲ. ಅಲ್ಲಲ್ಲಿ ಆಗಾಗ ಈ ಸಂಪ್ರದಾಯವನ್ನು ವಿರೋಧಿಸುವ ಪ್ರವೃತ್ತಿಗಳೂ ಕಂಡುಬಂದವು (ಇತಿಹಾಸದಲ್ಲಿ). ಹೀಗೆ ವಿರೋಧ ಪ್ರವೃತ್ತಿಗಳು ಸಲೆ ಎತ್ತಿದಾಗ ಜಿಜ್ಞಾಸೆ, ವಾದ-ವಿವಾದಗಳುಂಟಾಗಿ ಖಂಡನೆ-ಸಮರ್ಥನೆಗಳೂ ಹುಟ್ಟಿಕೊಂಡು ಆ ಮೂಲಕ ಯೂರೋಪಿನ ವಿಮರ್ಶನಾ ಪದ್ಧತಿಗೆ ಅವು ತಳಹದಿ ಹಾಕಿಕೊಟ್ಟವು. ಹೀಗೆ ಇತಿಹಾಸದುದ್ದಕ್ಕೂ ಅಭಿಜಾತಸಾಹಿತ್ಯ ಪರಂಪರೆಯನ್ನು ಸಮರ್ಥಿಸಿ ಅನುಸರಿಸುವ ಪ್ರವೃತ್ತಿಯೂ ಅದನ್ನು ವಿರೋಧಿಸಿ ಅದರ ಲೋಪದೋಷಗಳನ್ನು ವಿಮರ್ಶಿಸುವ ಪ್ರವೃತ್ತಿಯೂ ಹಾಸುಹೊಕ್ಕಾಗಿ ಪರಸ್ಪರ ಪೂರಕವಾಗಿ ಒಟ್ಟಾರೆ, ಸಾಹಿತ್ಯವಿಮರ್ಶೆಯ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ.
	
ಯೂರೋಪಿನ ಆಧುನಿಕ ಸಾಹಿತ್ಯದಲ್ಲಿ ಅಭಿಜಾತಪಂಥ ಪ್ರಾರಂಭವಾದುದು ಹದಿನೇಳನೆಯ ಶತಮಾನದ ಫ್ರಾನ್ಸಿನಲ್ಲಿ. ಪುರಾತನ ಸಾಹಿತಿಗಳು ಹೆಚ್ಚೋ, ಆಧುನಿಕರು ಹೆಚ್ಚೋ (ಏನ್ಸಂಟ್ಸ್, ಮಾಡರ್ನ್) ಎಂದು ಫ್ರಾನ್ಸಿನಲ್ಲಿ ಪ್ರಾರಂಭವಾದ ಜಿಜ್ಞಾಸೆ, ಇಂಗ್ಲೆಂಡಿನಲ್ಲೂ ಹರಡಿ ಹದಿನೇಳನೆಯ ಶತಮಾನದ ಕೊನೆಯಲ್ಲಿ ಹಾಗೂ ಹದಿನೆಂಟನೆಯ ಶತಮಾನದ ಮೊದಲಭಾಗದಲ್ಲಿ ಪುಸ್ತಕಗಳ ಕದನ (ದಿ ಬ್ಯಾಟಲ್ ಆಫ್ ದಿ ಬುಕ್) ಎಂಬ ಚರ್ಚೆಯಲ್ಲಿ ಮುಕ್ತಾಯವಾಯಿತು.
	
ಎರಡನೆಯ ಬಾರಿ ಈ ಚರ್ಚೆ ಪ್ರಾರಂಭವಾದುದು ಹದಿನೆಂಟನೆಯ ಶತಮಾನದ ಕೊನೆ ಹಾಗೂ ಹತ್ತೊಂಭತ್ತನೆಯ ಶತಮಾನದ ಪೂರ್ವಭಾಗದಲ್ಲಿ ಬಂದ ರೊಮ್ಯಾಂಟಿಕ್ ಕವಿಗಳ ಕಾಲದಲ್ಲಿ. ಆಧುನಿಕರೆಂದು ಹೇಳಿಕೊಂಡ ಹೊಸಕಾಲದ ಕವಿಗಳು ಅಭಿಜಾತಸಾಹಿತ್ಯದ ಆದರ್ಶಗಳು ಕ್ರಿಶ್ಚಿಯನ್ ತತ್ತ್ವಕ್ಕೆ ವಿರೋಧವೆಂದೂ ಧರ್ಮಬಾಹಿರವೆಂದೂ ವಾದಿಸಿದರು. ಈ ಪುರಾತನ ಕೃತಿಗಳು ಕೀಳಾದ ಅಭಿರುಚಿಯನ್ನು ಬೆಳೆಸುವುದೆಂದೂ ಅನೈತಿಕಮಾರ್ಗಕ್ಕೆ ಕೊಂಡೊಯ್ಯವುದೆಂದೂ ಸಮರ್ಥಿಸಿದರು. ಹೊಸಕಾಲದ ಸಾಹಿತ್ಯಕೃತಿಗಳು ಅಭಿಜಾತ-ಕೃತಿಗಳಿಗಿಂತ ಉತ್ತಮವಾಗಲು ಸಾಧ್ಯವಿಲ್ಲವೆನ್ನುವುದು ಪ್ರಗತಿಯ ತತ್ತ್ವಕ್ಕೆ ವಿರೋಧವೆಂದು ಸಾರಿದರು. ತಮ್ಮ ದೇಶದ ಕಾಲದ ಕೃತಿಗಳನ್ನು ಪ್ರಶಂಸಿಸುವುದರ ಬದಲು ಪರದೇಶದ ವಿಭಿನ್ನ ಸಂಸ್ಕೃತಿಯ ಪ್ರತೀಕವಾದ ಅಭಿಜಾತಸಾಹಿತ್ಯವನ್ನು ಶ್ಲಾಘಿಸುವುದು ತಪ್ಪೆಂದು ಹೇಳಿ ಅಭಿಜಾತಸಾಹಿತ್ಯದ ಸೂತ್ರಗಳು ಪ್ರತಿಗಾಮಿಗಳೆಂದೂ ಸಲ್ಲದ ನಿರ್ಬಂಧಗಳನ್ನು ತಂದೊಡ್ಡುವುದೆಂದೂ ರೊಮ್ಯಾಂಟಿಕ್ ಸಾಹಿತಿಗಳು ಅವನ್ನು ವಿರೋಧಿಸುವ ಘೋಷಣೆಗಳನ್ನು ಪ್ರತಿಪಾದಿಸಿದರು.
	
ಯೂರೋಪಿನ ಬೇರೆ ಬೇರೆ ದೇಶಗಳಲ್ಲಿ ನಡೆದ ಅಭಿಜಾತಸಾಹಿತ್ಯ ಪಂಥದ ಚಳುವಳಿಗಳೆಲ್ಲವೂ ಆಯಾ ರಾಷ್ಟ್ರಗಳ ಮೂಲ ಪರಂಪರೆಯನ್ನು ಕಡೆಗಣಿಸಿ, ರಾಷ್ಟ್ರದ ಗಮನವನ್ನು ಪರಾತನಗ್ರೀಕರ ಕಾಲಕ್ಕೆ ಕೊಂಡೊಯ್ದವೆಂದು ಹೇಳುವುದು ತಪ್ಪು. ಇಟಲಿಯಲ್ಲಿ ಪ್ರಾರಂಭವಾದ ಹೊಸಹುಟ್ಟಿನ ಚಟುವಟಿಕೆಗಳು ಮೂಲತಃ ರಾಷ್ಟ್ರೀಯ ಚಳವಳಿಯ ರೂಪವನ್ನೇ ಪಡೆದುವು. ಅಲ್ಲಿನ ಮಾನವತಾವಾದಿಗಳು ಪುರಾತನ ರೋಮಿನ ಭವ್ಯಪರಂಪರೆಯನ್ನು ಗುರುತಿಸಿ ಅದನ್ನು ಪುನರುಜ್ಜೀವನಗೊಳಿಸಲು ಉದ್ಯುಕ್ತರಾದರು. ಕಾವ್ಯದಲ್ಲಿ ಇಟಲಿಯ ದೇಶಿಯನ್ನೇ ಬಳಸಬೇಕೆಂದು ದಾಂಟೆ ನೀಡಿದ ಆದೇಶವನ್ನು ಪೆಟ್ರಾರ್ಕ್ ಮತ್ರು ಬೊಕ್ಯಾಚಿಯೊ ಮುಂತಾದವರು ಪರಿಣಾಮಕಾರಿಯಾಗಿ ಅನುಸರಿಸಿದರು. ಅಭಿಜಾತ ಸಾಹಿತ್ಯದ ಶೈಲಿಯನ್ನು ದೇಶಿಯೊಳಕ್ಕೆ ಅಳವಡಿಸಿಕೊಂಡರು.
	
ಫ್ರಾನ್ಸಿನಲ್ಲಿ ರೂಪಗೊಂಡ ಅಭಿಜಾತಪಂಥ, ಉಜ್ವಲ ರಾಷ್ಟ್ರೀಯ ಸ್ವರೂಪವನ್ನುಳ್ಳ ಆದರೆ ಗ್ರೀಕ್ ಆದರ್ಶಗಳನ್ನು ಹೊಂದಿದ-ಸಾಹಿತ್ಯ ಸೃಷ್ಟಿಗೆ ಕಾರಣವಾಯಿತು.
	

ಆಗಸ್ಟನ್ ಯುಗವೆಂದು ಕರೆಯಲಾದ ಹದಿನೆಂಟನೆಯ ಶತಮಾನದ ಇಂಗ್ಲೆಂಡಿನ ಸಾಹಿತಿಗಳು, ಫ್ರೆಂಚ್ ಸಂಸ್ಕøತಿ ಈ ಮೊದಲೇ ಅನುಸರಿಸಿದ್ದ ಅಭಿಜಾತ ಸಾಹಿತ್ಯ ಸೂತ್ರಗಳನ್ನು ಅಳವಡಿಸಿಕೊಳ್ಳಲೆತ್ನಿಸಿದರು. ನಯವಾದ, ನವಿರಾದ, ಅಭಿರುಚಿಯುಳ್ಳ ಕಲಾಪ್ರಪೂರ್ಣವಾದ, ಹೊಸಸಾಹಿತ್ಯ ನಿರ್ಮಾಣಕ್ಕೆ ತೊಡಗಿದರು. 
	
ಹದಿನೆಂಟನೆಯ ಶತಮಾನದ ಜರ್ಮನಿಯ ಸಾಹಿತ್ಯದಲ್ಲಿ ನೂತನ ಸೃಷ್ಟಿಗೆ ಕಾರಣನಾದನೆಂದು ಹೇಳಲಾದ ಗಾಟ್‍ಶೆಡ್ ಆಡಂಬರದಿಂದ ತುಂಬಿದ ಜರ್ಮನಿಯ ಪಂಡಿತರಮ್ಯ ಸಾಹಿತ್ಯಕ್ಕೂ, ಪಾಮರರಿಗೆ ಉಣಬಡಿಸುತ್ತಿದ್ದ ಒರಟುಸಾಹಿತ್ಯಕ್ಕೂ ನಡುವಣ ಭಿನ್ನತೆಯನ್ನು ಹೋಗಲಾಡಿಸಿ ತನ್ನ ದೇಶದಲ್ಲಿ ಎಲ್ಲ ವರ್ಗದ ಜನರನ್ನೂ ರಂಜಿಸುವಂಥ ರಾಷ್ಟ್ರೀಯಸಾಹಿತ್ಯವನ್ನು ನಿರ್ಮಿಸಬೇಕೆಂದು ಆಶಿಸಿದ. ಈಗಾಗಲೇ ಫ್ರೆಂಚ್ ಸಾಹಿತಿಗಳು ಗ್ರೀಕರಿಂದ ಸ್ಫೂರ್ತಿಪಡೆದು ಸ್ವಂತಕ್ಕೆ ಗೌರವ ತರುವಂಥ ರಾಷ್ಟ್ರೀಯಸಾಹಿತ್ಯ ನಿರ್ಮಿಸಿದ್ದರು. ಆದ್ದರಿಂದ ಗಾಟ್‍ಶೆಡ್ ಫ್ರೆಂಚ್ ಸಾಹಿತ್ಯವನ್ನೇ ಮಾದರಿಯಾಗಿ ಅನುಸರಿಸಿದ.
	
ಮುಂದಿನ ಕೆಲವು ಶತಮಾನಗಳಲ್ಲಿ ಅಭಿಜಾತಪಂಥದ ಚಳವಳಿ ದೇಶದಿಂದ ದೇಶಕ್ಕೆ ಹರಡಿದಂತೆ ಕಾಣುತ್ತದೆ. ಗ್ರೀಕ್ ವಿದ್ವಾಂಸರು ಇಟಲಿಗೆ ವಲಸೆ ಹೊರಟಾಗ ಅಭಿಜಾತಪರಂಪರೆಯ ಮೌಲ್ಯಗಳು ಮುಖ್ಯವಾಗಿ ಸಾಹಿತ್ಯ ಹಾಗೂ ದರ್ಶನ ಶಾಸ್ತ್ರದಲ್ಲಿ ಅಭಿವ್ಯಕ್ತಗೊಳಿಸಲು ಸಾಧ್ಯವಾಯಿತು; ಉತ್ಕøಷ್ಟಶಿಲ್ಪ ಹಾಗೂ ಕಲಾಕೃತಿಗಳು ನಿರ್ಮಿವಾದಂತೆ, ಅಷ್ಟೇ ಅಮೂಲ್ಯವಾದ ಸಾಹಿತ್ಯಕೃತಿಗಳು ಸೃಷ್ಟಿಯಾಗದಿದ್ದರೂ ಆ ಯುಗದಲ್ಲಿ ಅಭಿಜಾತಮನೋಧರ್ಮ ರೂಪುಗೊಂಡಿತೆನ್ನಬಹುದು. ಹೊಸಯುಗದ ಸಾರ್ವತ್ರಿಕದೃಷ್ಟಿಯನ್ನು ಎರಾಸ್ಮನ್‍ನಂಥ ಉಜ್ವಲ ವಿದ್ವಾಂಸರಲ್ಲಿ ಕಾಣಬಹುದು. ಅರಿಸ್ಟಾಟಲನ ಕಾವ್ಯ ಮೀಮಾಂಸೆಯನ್ನು ಕುರಿತ ವಿಪುಲವಾದ ಚರ್ಚೆ ವಾಖ್ಯಾಯಗಳು ಸಾಹಿತ್ಯವಿಮರ್ಶೆಯ ಬೆಳೆವಣಿಗೆಗೆ ದಾರಿತೋರಿದುವು. ಸ್ಕೆಲಿಜರ್ (1561), ಕ್ಯಾಸಲ್‍ವೆಟ್ರೋ (1571) ಭವ್ಯಕಾವ್ಯ ಹಾಗೂ ರುದ್ರನಾಟಕಕ್ಕೆ ಕ್ರಮವಾದ ಶೈಲಿಯನ್ನು ಸೃಜಿಸಬೇಕೆಂದು ಸೂಚಿಸಿದ ಟ್ರಿಸಿನೋ ಮುಂತಾದವರು ಪ್ರತಿಪಾದಿಸಿದ ಸೂತ್ರಗಳು ಕಲಾನಿರ್ಮಾಣದಲ್ಲಿ ಇರಬೇಕೆಂದು ಹೇಳುವ ಸತ್ಯನಿಷ್ಠೆ ಹಾಗೂ ಕಲಾಕೃತಿಯ ಸಾಮರಸ್ಯವನ್ನು ಕುರಿತ ವಿಚಾರಪರಂಪರೆಯನ್ನು ನಿರ್ಮಿಸಿದುವು.
	
ಅಭಿಜಾತ ಸಂಪ್ರದಾಯವನ್ನು ಫ್ರಾನ್ಸಿನಲ್ಲಿ ಸ್ಥಾಪಿಸಲೆಳಸಿದವರಲ್ಲಿ ಹದಿನಾರನೆಯ ಶತಮಾನದಲ್ಲಿ ಪ್ಲಿಯೇಡ್ ಮುಖ್ಯನು. ಆತನ ತತ್ತ್ವಗಳನ್ನು ವಿರೋಧಿಸಿದ ಮಾಲ್‍ಹರ್ಬ್ ಫ್ರೆಂಚ್ ಭಾಷೆಯನ್ನು ಸಂಸ್ಕರಿಸಲು ಯತ್ನಿಸಿ, ಅಭಿಜಾತಪರಂಪರೆಯ ಮೂಲ ಶಾಸಕನಾದ. ಬಾಲೋ ತನ್ನ ಕಾವ್ಯಕಲೆ (ಆರ್ಸ್ ಪೊಯಟೀಕ್) ಎಂಬ ಗ್ರಂಥದಲ್ಲಿ ಅಭಿಜಾತಸಾಹಿತ್ಯದ ಲಕ್ಷಣವಿವರಣೆಗಳನ್ನು ಕ್ರೋಢಿಕರಿಸಿದನು. ಕಾರ್ನಿಲ್ ಮತ್ತು ರಾಸಿನ್‍ರ ದುರಂತನಾಟಕಗಳು, ಮಾಲಿಯರ್‍ನ ಪ್ರಹಸನಗಳು, ಪ್ಯಾಸ್ಕೆಲ್ ರಚಿಸಿದ ಧಾರ್ಮಿಕ ಟಿಪ್ಪಣಿಗಳು (ದಿ ಪೆನ್ಸೀಸ್), ಲಾ ಫ್ಯಾಂಟೇನಿನ ಕಟ್ಟುಕಥೆಗಳು (ಫೇಬಲ್ಸ್)- ಇವು ಸೃಷ್ಟಿಯಾದ ಆ ಕಾಲದಲ್ಲಿ ಅಭಿಜಾತಸಾಹಿತ್ಯದ ಸತ್ತ್ವವನ್ನು ಎಷ್ಟರ ಮಟ್ಟಿಗೆ ಪಾಲಿಸಿದರೆನ್ನುವುದು ಸ್ವಲ್ಪ ಸಂದೇಹಾಸ್ಪದ. ವ್ಯಗ್ರವಾದ ಭಾವೋದ್ರೇಕವನ್ನು ಹೊರಸೂಸುವ ಆ ಕಾಲದ ರಾಗೋಜ್ವಲ ಕೃತಿಗಳನ್ನು ಬರೆದ ಸಾಹಿತಿಗಳು ಅಭಿಜಾತಸಾಹಿತ್ಯದ ವಿಶಿಷ್ಟ ಲಕ್ಷಣಗಳನ್ನು ಪಾಲಿಸಬೇಕೆಂಬ ನೇಮವನ್ನು ಕಲಾನಿರೂಪಣೆಗೆ ಬೇಕಾದ ಶೈಲಿ ಹಾಗೂ ಸಂಯಮದ ಮನೋಧರ್ಮವನ್ನು ರೂಪಿಸಲು ಅಭಿಜಾತಸಾಹಿತ್ಯ ನೆರವಾಯಿತು.
	
ಫ್ರಾನಿನಲ್ಲಿ ಅಭಿಜಾತಸಾಹಿತ್ಯಪಂಥ ಕೇವಲ ಶ್ರೀಮಂತವರ್ಗದ ಪ್ರತಿಕ್ರಿಯೆಯಾಗಿ ಪರಿಣಮಿಸಿ ಕಲೆ ಕೇವಲ ಸ್ವತ್ತಾಯಿತು. ಆದರೆ ಅಲೆಕ್ಸಾಂಡರ್ ಪೋಪ್‍ನ ಕಾಲದ ಇಂಗ್ಲೆಂಡಿನಲ್ಲಿ ಈ ಪಂಥ ಮಧ್ಯಮವರ್ಗದ ¸ಮಾಜದಿಂದಲೇ ರೂಪ ಪಡೆಯಿತು. ಡ್ರೈವರ್ ಹಾಗೂ ಲಾಕ್ ಹಾಕಿಕೊಟ್ಟ ವಿಮರ್ಶೆ ಹಾಗು ವಿಚಾರ ಪರಂಪರೆಯ ತಳಹದಿಯ ಮೇಲೆ ಈ ಪಂಥವನ್ನು ರೂಪಿಸಲಾಯಿತು. ಅಭಿಜಾತಪಂಥ ಸೂಚಿಸುವ ಭವ್ಯತೆ ಹಾಗೂ ಸಂಯಮಗಳಿಗಿಂತಲೂ ಮಿಗಿಲಾಗಿ ವಿವೇಚನೆ-ಔಚಿತ್ಯಗಳಿಗೇ ಹೆಚ್ಚು ಗಮನವನ್ನು ಕೊಡುವ ಪ್ರವೃತ್ತಿಯನ್ನು ಅಡಿಸನ್, ಸ್ಟೀಲ್ ಮತ್ತು ಸ್ವಿಫ್ಟ್ ಮುಂತಾದವರ ಕೃತಿಗಳಲ್ಲಿ ಹಾಗೂ ಚಟುವಟಿಕೆಗಳಲ್ಲಿ ಕಾಣಬಹುದು. ಅಭಿಜಾತಸಾಹಿತ್ಯ ಸೂತ್ರಗಳ ಸಾರವೆಲ್ಲವೂ ಡಾ. ಜಾನ್‍ಸನ್‍ನ ವ್ಯಕ್ತಿತ್ವದಲ್ಲೇ ಒಡಮೂಡಿರುವುದನ್ನು ಗಮನಿಸಬಹುದು. ಹೋಮರ್‍ನ ಕಾವ್ಯವನ್ನು ಭಾಷಾಂತರ ಮಾಡಿದ ಪೋಪ್ ಕವಿ, ಅಭಿಜಾತಸಾಹಿತ್ಯದ ಸಾರವನ್ನೆಲ್ಲ ತನ್ನ ಎಸ್ಸೇ ಆನ್ ಕ್ರಿಟಿಸಿಸಂ ಪುಸ್ತಕದಲ್ಲಿ ಎರಕ ಹೊಯ್ದ. ಅಭಿಜಾತಪಂಥದಿಂದ, ಸ್ಫೂರ್ತಿ ಪಡೆದ ಶಾಫ್ಟ್ಸ್‍ಬರಿ ಮುಂತಾದವರೆಲ್ಲರೂ ಸಾಹಿತಿಯ ಸಾಮಾಜಿಕ ಪ್ರಜ್ಞೆ, ಕರ್ತವ್ಯನಿಷ್ಠೆ, ಶಿಸ್ತು, ನೈತಿಕ ಹಾಗೂ ಸೌಂದರ್ಯತತ್ತ್ವದ ಅರಿವು - ಮುಂತಾದ ಲಕ್ಷಣಗಳ ಆವಶ್ಯಕತೆಯನ್ನು ಕುರಿತು ಚರ್ಚಿಸಿದರು.
	
ಆ ಶತಮಾನದ ಜರ್ಮನಿಯ ವಿಂಕಲ್‍ಮನ್ ಗ್ರೀಕ್ ವಾಸ್ತುಶಿಲ್ಪವನ್ನು ಆಳವಾಗಿ ಅಭ್ಯಸಿಸಿ, ಅಭಿಜಾತಪಂಥದ ಮೂಲತತ್ತ್ವಗಳನ್ನು ಕ್ರೋಢೀಕರಿಸಿದ. ರೊಮ್ಯಾಂಟಿಕ್ ಪಂಥದ ಅನ್ವೇಷಣಾದೃಷ್ಟಿಯ ಮೂಲಕ ಗ್ರೀಕ್ ಸಂಸ್ಕøತಿಯ ಸತ್ತ್ವವನ್ನು ಗುರುತಿಸಿ, ಹೊಸ ಹೆಲೆನಿಕ್ ಸಮನ್ವಯ ದೃಷ್ಟಿಯನ್ನು ಮೂಡಿಸಿದ ಕೀರ್ತಿ ಈತನದು. ಕೇವಲ ಪುರಾತನ ಸಾಹಿತ್ಯ ಸೂತ್ರಗಳನ್ನು ಪಠಿಸಿ, ಶುಷ್ಕ ಚರ್ಚೆಯಿಂದ ತೃಪ್ತರಾಗುತ್ತಿದ್ದ ಹಳೆಯ ಪಂಡಿತರ ಪ್ರವೃತ್ತಿಯನ್ನು ಬಿಟ್ಟು ಈತ ನಿಚ್ಚಳವಾದ ಮಾರ್ಗವನ್ನನುಸರಿಸಿದ. ಅಭಿಜಾತಪರಂಪರೆಗೆ ಸೇರಿದ ಶಿಲ್ಪಕೃತಿಗಳನ್ನು ಕೂಲಂಕಷವಾಗಿ ಪರಿಶೀಲಿಸುವುದರ ಮೂಲಕ ಅಭಿಜಾತಪಂಥದ ಅಂತರಾರ್ಥವನ್ನು ತಿಳಿಯುವುದು ಮೇಲು ಎಂದು ಈತ ತೋರಿಸಿದ.
	
ಅಭಿಜಾತ ಸಾಹಿತ್ಯದ ವಸ್ತು ಪ್ರತಿರೂಪಗಳನ್ನು ಬಳಸಿಕೊಳ್ಳುವಾಗ ಕಾಲದೇಶಗಳ ಅರಿವು, ಸಮಕಾಲೀನಪ್ರಜ್ಞೆ ಅತ್ಯಾವಶ್ಯಕ. ಮಿತಿಮೀರಿದ ಪೂರ್ವಕಥಾಸೂಚನೆಗಳು ವಿಕೃತ ಲಕ್ಷಣಗಳಾಗಿ ಪರಿಣಮಿಸಿ, ಅಭಿಜಾತಕಲ್ಪನೆಯ ಮೌಲ್ಯಗಳನ್ನು ಹೀನಯಿಸುವ ಅಪಾಯಕ್ಕೊಳಗಾಗಬಹುದೆನ್ನುವುದಕ್ಕೆ ಆಧುನಿಕ ಅಸ್ತಿತ್ವವಾದಿ ಸಾಹಿತಿಗಳೇ (ಎಕ್ಸಿಸ್ಟೆಂಷಿಯಲಿಸ್ಟ್ ರೈಟರ್ಸ್) ಸಾಕ್ಷಿ.     

(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ